ಅರಸಿಕೆರೆ:ರಾಜ್ಯ ಕಾಂಗ್ರೆಸ್ ಸರ್ಕಾರದ ಬಹುಮುಖ್ಯ ಯೋಜನೆಗಳಲ್ಲಿ ಒಂದಾಗಿರುವ ಪಂಚ ಗ್ಯಾರಂಟಿ ಯೋಜನೆಗಳು ಪರಿಣಾಮಕಾರಿ ಅನುಷ್ಠಾನದ ನಿಟ್ಟಿನಲ್ಲಿ ಬಹುತೇಕ ಯಶಸ್ವಿಯ ಹಾದಿಯಲ್ಲಿವೆ, ಯುವನಿಧಿ ಯೋಜನೆ ಅಡಿ ಹೆಚ್ಚೆಚ್ಚು ನೊಂದಣಿಗೆ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಹೆಚ್ಚಿನ ಕ್ರಮ ಅಗತ್ಯವಿದೆ ಎಂದು ತಾಲೂಕು ಪಂಚಾಯತಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷ ಗೀಜಿಹಳ್ಳಿ ಧರ್ಮಶೇಖರ್ ಅಧಿಕಾರಿಗಳಿಗೆ ಸೂಚಿಸಿದರು.
ನಗರದ ತಾಲೂಕು ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ಶನಿವಾರ ನಡೆದ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಮಾಸಿಕ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಯುವ ನಿಧಿ ಯೋಜನೆಯಡಿ ತಾಲೂಕಿನಲ್ಲಿ ನೋಂದಣಿ ಸಂಖ್ಯೆ ಕಡಿಮೆ ಇದೆ. ಈ ನಿಟ್ಟಿನಲ್ಲಿ ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಆಯುಕ್ತಾಲಯವು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಜಾಹೀರಾತು ಮತ್ತು ಬ್ಯಾನರ್, ಫ್ಲೆಕ್ಸ್ ಇನ್ನಿತರ ಮಾಹಿತಿ ಮೂಲಕ ಯುವಕರಿಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಿ, ಹೆಚ್ಚಿನ ಸಂಖ್ಯೆಯ ನೋಂದಣಿ ಆಗುವಂತೆ ನೋಡಿಕೊಳ್ಳಬೇಕು, ಜೊತೆಗೆ ಯುವನಿಧಿ ಯೋಜನೆ ಅಡಿ ನೊಂದಣಿ ಅರ್ಜಿ ಸ್ವೀಕಾರ ಆಗುತ್ತಿಲ್ಲ, ಇದರ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು, ಅದೇ ರೀತಿ ಐದು ಗ್ಯಾರಂಟಿ ಯೋಜನೆಗಳ ಬಗ್ಗೆ ಯಾವುದೇ ಲೋಪಗಳು ಬರದಂತೆ ಸಂಬಂಧಪಟ್ಟ ಅಧಿಕಾರಿಗಳು ನಿಗವಹಿಸಬೇಕು ಎಂದರು. ತಾಲೂಕಿನಲ್ಲಿ ಯುವನಿಧಿ ಯೋಜನೆಯಡಿ ಪುರುಷರು ಪದವಿ ಪಡೆದವರು 434 ಹಾಗೂ ಡಿಪ್ಲೋಮಾ ಪಡೆದ 5 ಒಟ್ಟು ಪುರುಷರು 439 ಹಾಗೂ ಮಹಿಳೆಯರಲ್ಲಿ ಪದವಿ ಪಡೆದ 489, ಡಿಪ್ಲೋಮಾ ಪಡೆದ 11 ಒಟ್ಟು 500, ಪುರುಷರು ಮತ್ತು ಮಹಿಳೆಯರು ಸೇರಿದಂತೆ ಒಟ್ಟು ರೂ.939 ಜನರಿಗೆ ಹಣ ಸಂದಾಯ ಆಗಿದೆ ಎಂಬ ಮಾಹಿತಿ ಸಭೆಯ ಗಮನಕ್ಕೆ ತರಲಾಯಿತು.
ಶಕ್ತಿ ಯೋಜನೆ ಅಡಿಯಲ್ಲಿ ಯಾವುದೇ ಸಮಸ್ಯೆಗಳು ಇಲ್ಲ ಪ್ರಯಾಣಿಕರ ಸಂಖ್ಯೆಗೆ ಅನುಗುಣವಾಗಿ ಕೆ ಎಸ್ ಆರ್ ಟಿ ಸಿ ಬಸ್ಸುಗಳ ಸಂಚಾರ ಸಾಗುತ್ತಿದೆ, ನೌಕರರ ವೇತನ ಸಕಾಲಕ್ಕೆ ಸಂದಾಯಆಗುತ್ತಿದೆ ಎಂದು ತಾಲೂಕು ಕೆ ಎಸ್ ಆರ್ ಟಿ ಸಿ ಘಟಕದ ವ್ಯವಸ್ಥಾಪಕ ಕೃಷ್ಣಪ್ಪ ಮಾಹಿತಿ ನೀಡಿದರು. ಇದಕ್ಕೆ ಪ್ರತಿಕ್ರಿಸಿದ ಅಧ್ಯಕ್ಷ ಧರ್ಮಶೇಖರ್ ಅವರು ಶಕ್ತಿ ಯೋಜನೆಯು ಮಹಿಳೆಯರ ಸೇವಾ ಕಾರ್ಯಕ್ಕೆ ಸಾಕ್ಷಿಯಾಗಿದೆ. ಇದರಿಂದ ಸಾರ್ವಜನಿಕರು ಮತ್ತು ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳಿಗೆ ಯಾವುದೇ ಸಮಸ್ಯೆ ಎದುರಾಗದಂತೆ ಇಲಾಖೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು. ನಗರ ಬಸ್ ನಿಲ್ದಾಣದಿಂದ ನಾಲ್ಕು ಮಾರ್ಗಗಳಿಗೂ ಒಂದು ಸ್ಟೇಜ್ ವರಗೆ ಹತ್ತು ರೂ ಟಿಕೆಟ್ ಮಾಡಿ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಬಸ್ಸುಗಳನ್ನು ಬಿಡುವಂತೆ ತಿಳಿಸಿದರು.
ಗೃಹಲಕ್ಷ್ಮಿ ಯೋಜನೆಗೆ ಸಂಬಂಧಿಸಿದಂತೆ ತಾಲೂಕು ಪ್ರಭಾರ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಯೋಗೀಶ್ ಅವರು ಮಾಹಿತಿ ನೀಡಿ ಜೂನ್ ಮತ್ತು ಜುಲೈ ತಿಂಗಳ ಗೃಹಲಕ್ಷ್ಮಿ ಹಣ ಸದ್ಯದಲ್ಲೇ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಜಮಾ ಆಗಲಿದೆ. ಆದಾಯ ತೆರಿಗೆ ಮತ್ತು ಜಿಎಸ್‌ಟಿ ಪಾವತಿ ಸಮಸ್ಯೆ ಇರುವ 193 ಫಲಾನುಭವಿಗಳಿಗೆ ಗೃಹಲಕ್ಷ್ಮಿ ಹಣವು ಬಾಕಿ ಇದೆ, ಇದುವರೆಗೆ ಸುಮಾರು 329.78 ಕೋಟಿ ರೂಪಾಯಿ ಹಣವು ಫಲಾನುಭವಿಗಳ ಬ್ಯಾಂಕ್ ಖಾತೆಗೆ ಜಮಾ ಆಗಿದೆ ಎಂದು ಮಾಹಿತಿ ಒದಗಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷ ಧರ್ಮ ಶೇಖರ್ ಅವರು ಬಾಕಿ ಇರುವ ಗೃಹಲಕ್ಷ್ಮಿ ಹಣವು ಬರುವ ಗೌರಿ ಗಣೇಶ ಹಬ್ಬದ ವೇಳೆಗೆ ಎಲ್ಲಾ ಫಲಾನುಭವಿಗಳಿಗೆ ಸಂದಾಯ ಆಗಲಿದೆ, ತಾಲೂಕಿನಲ್ಲಿರುವ ಅತಿ ಬಡವರನ್ನು ಗುರುತಿಸಿ ಅಂತಹವರನ್ನು ನೋಂದಣಿ ಮಾಡಿ ಹಣ ಪಾವತಿ ಆಗುವಂತೆ ಕ್ರಮ ಕೈಗೊಳ್ಳಬೇಕು, ಅತ್ತೆ ನಿಧನವಾಗಿರುವ ಕುಟುಂಬಗಳನ್ನು ಗುರುತಿಸಿ ಸೊಸೆಗೆ ಗೃಹಲಕ್ಷ್ಮಿ ಹಣ ಬಿಡುಗಡೆ ಮಾಡಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ತಾಕೀತು ಮಾಡಿದರು.
ಸೆಸ್ಕ್ ಎಇಇ ಮಂಜುನಾಥ್ ಮಾತನಾಡಿ ಗೃಹ ಜ್ಯೋತಿ ಯೋಜನೆ ಅಡಿಯಲ್ಲಿ ವಸತಿ ಮನೆಗಳ ಗ್ರಾಹಕರು ಬಳಕೆ ಮಾಡಿರುವ ವಿದ್ಯುತ್ತಿಗೆ ಸಂಬಂಧಿಸಿದಂತೆ ಸುಮಾರು ಒಟ್ಟು 62.68 ಕೋಟಿ ರೂಪಾಯಿ ಸರ್ಕಾರದಿಂದ ಬಿಡುಗಡೆ ಆಗಿದೆ, ಜೊತೆಗೆ ತಾಲೂಕಿನ ವಿದ್ಯುತ್ ಸಮಸ್ಯೆ ನೀಗಿಸಲು ತಾಲೂಕಿನಲ್ಲಿ ಸುಮಾರು 37 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆಗೆ ಪ್ರಕ್ರಿಯೆ ಪ್ರಗತಿಯಲ್ಲಿ ಇದೆ ಎಂದು ಸಭೆಯ ಗಮನಕ್ಕೆ ತಂದರು.
ಅನ್ನಭಾಗ್ಯ ಯೋಜನೆಗೆ ಸಂಬಂಧಿಸಿದಂತೆ ತಾಲೂಕು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ನಿರೀಕ್ಷಕ ಬಾಲಚಂದ್ರ ಮಾಹಿತಿ ನೀಡಿದರು.
ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಸತೀಶ್, ತಾಲೂಕು ಪಂಚಾಯತಿ ಯೋಜನೆಗಳ ಅನುಷ್ಠಾನ ಸಮಿತಿಯ ಪದಾಧಿಕಾರಿಗಳಾದ ಬಸವರಾಜು ಬಿ ಎನ್, ಪ್ರದೀಪ್ ಕುಮಾರ್, ವಿರೂಪಾಕ್ಷಪ್ಪ, ಚಾಂದ್ ಪಾಷ, ಸಿದ್ದೇಶ್, ಶಿವಕುಮಾರ್, ಕಮಲಮ್ಮ, ಕೃಷ್ಣೇಗೌಡ ಡಿ ಆರ್, ಲೋಕೇಶ್ ಎಚ್ ಸಿ, ಸಿರಾಜ್ ಸೇರಿದಂತೆ ಇತರರು ಉಪಸ್ಥಿತರಿದ್ದರು.