ರಾಗಿ ಖರೀದಿ ಬಾಕಿ ಹಣವನ್ನು ಕೂಡಲೇ ಬಿಡುಗಡೆ ಮಾಡಿ

ಉಮೇಶ್ ಬಾಣಾವರ
Disclosure: This website may contain affiliate links, which means I may earn a commission if you click on the link and make a purchase. I only recommend products or services that I personally use and believe will add value to my readers. Your support is appreciated!

ರಾಗಿ ಖರೀದಿ ಬಾಕಿ ಹಣವನ್ನು ಕೂಡಲೇ ಬಿಡುಗಡೆ ಮಾಡಿ: ರಮೇಶ್ ದುಮ್ಮೇನಹಳ್ಳಿ ಆಗ್ರಹ

ಅರಸೀಕೆರೆ, ಜು. 8 : ರಾಜ್ಯದಲ್ಲಿ ಮುಂಗಾರು ಮಳೆಯಾಗುತ್ತಿದ್ದರೂ ರಾಗಿ ಖರೀದಿಯ ಬಾಕಿ ಹಣ ಬಿಡುಗಡೆಯಾಗದ ಕಾರಣ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಅರಸೀಕೆರೆ ತಾಲೂಕು ಬಿಜೆಪಿ ಮಾಜಿ ಅಧ್ಯಕ್ಷ ರಮೇಶ್ ದುಮ್ಮೇನಹಳ್ಳಿ ಸರ್ಕಾರವನ್ನು ಆಗ್ರಹಿಸಿದ್ದಾರೆ.

ನೇಫೆಡ್ ಮೂಲಕ ನಡೆದ ರಾಗಿ ಖರೀದಿ ಪ್ರಕ್ರಿಯೆ ಏಪ್ರಿಲ್ 30ರಂದು ಮುಕ್ತಾಯಗೊಂಡಿದ್ದು, ಎರಡು ತಿಂಗಳಿಗಿಂತ ಹೆಚ್ಚು ಕಾಲ ಕಳೆದಿದ್ದರೂ ರೈತರ ಖಾತೆಗಳಿಗೆ ಮಾರ್ಚ್ 5ರವರೆಗೆ ಖರೀದಿಸಿದ ಬೆಳೆಯ ಹಣ ಮಾತ್ರ ಜಮೆಯಾಗಿದೆ. ನಂತರದ ಅವಧಿಯ ರೈತರಿಗೆ ಇನ್ನೂ ಹಣ ಬಿಡುಗಡೆಯಾಗಿಲ್ಲ ಎಂದು ಅವರು ಆರೋಪಿಸಿದರು.

ಪ್ರಸ್ತುತ ರೈತರು ಮತ್ತೊಮ್ಮೆ ರಾಗಿ ಬಿತ್ತನೆಗೆ ಭೂಮಿ ಸಿದ್ಧಪಡಿಸಿಕೊಂಡು ಮಳೆಯ ನಿರೀಕ್ಷೆಯಲ್ಲಿದ್ದಾರೆ. ಬಿತ್ತನೆಗೆ ಅಗತ್ಯವಾದ ಗೊಬ್ಬರ ಹಾಗೂ ಇತರೆ ಕೃಷಿ ಚಟುವಟಿಕೆಗಳಿಗೆ ಹಣದ ಕೊರತೆ ಎದುರಾಗಿದ್ದು, ರಾಗಿ ಮಾರಾಟದ ಹಣಕ್ಕಾಗಿ ಕಾದು ಕುಳಿತಿದ್ದಾರೆ. ಇಂತಹ ಸಂಕಷ್ಟದ ಸಂದರ್ಭದಲ್ಲಿ ಸರ್ಕಾರ ರೈತರ ಸಮಸ್ಯೆಗೆ ಆದ್ಯತೆ ನೀಡದೆ ಇತರೆ ವಿಷಯಗಳಲ್ಲಿ ತೊಡಗಿಕೊಂಡಿದೆ ಎಂದು ಅವರು ಟೀಕಿಸಿದರು.

ಅರಸೀಕೆರೆ, ತಿಪಟೂರು, ತುಮಕೂರು ಹಾಗೂ ಕಡೂರು ಭಾಗಗಳಲ್ಲಿ ತೆಂಗಿನ ಬೆಳೆ ರೋಗಬಾಧೆಯಿಂದ ನಷ್ಟಕ್ಕೀಡಾಗಿದ್ದು, ಇಳುವರಿಯೂ ಕುಸಿದಿರುವ ಕಾರಣ ರೈತರು ಈಗಾಗಲೇ ಆರ್ಥಿಕ ಸಂಕಷ್ಟದಲ್ಲಿದ್ದಾರೆ. ಈ ಎಲ್ಲ ಪರಿಸ್ಥಿತಿಯನ್ನು ಮನಗಂಡು ರಾಗಿ ಖರೀದಿಯ ಬಾಕಿ ಹಣವನ್ನು ಹಂತ ಹಂತವಾಗಿ ಬಿಡುಗಡೆ ಮಾಡುವ ಬದಲು ಎಲ್ಲ ರೈತರಿಗೆ ಒಂದೇ ಬಾರಿ ಸಂಪೂರ್ಣ ಹಣ ಬಿಡುಗಡೆ ಮಾಡಬೇಕು ಎಂದು ಅವರು ಒತ್ತಾಯಿಸಿದರು.

ಸರ್ಕಾರ ತಕ್ಷಣ ಕ್ರಮ ಕೈಗೊಳ್ಳದಿದ್ದರೆ ತಾಲೂಕು ದಂಡಾಧಿಕಾರಿಗಳ ಕಚೇರಿ ಎದುರು ರೈತರೊಂದಿಗೆ ಪ್ರತಿಭಟನೆ ನಡೆಸಲಾಗುವುದು ಎಂದು ರಮೇಶ್ ದುಮ್ಮೇನಹಳ್ಳಿ ಎಚ್ಚರಿಕೆ ನೀಡಿದರು.

ಅದೇ ವೇಳೆ, ಸ್ಥಳೀಯ ಶಾಸಕ ಶಿವಲಿಂಗೇಗೌಡರು ಇತರೆ ರಾಜಕೀಯ ಚಟುವಟಿಕೆಗಳಿಗಿಂತ ರೈತರ ಸಮಸ್ಯೆಗೆ ಹೆಚ್ಚಿನ ಆದ್ಯತೆ ನೀಡಿ, ರಾಜ್ಯ ಸರ್ಕಾರದ ಮೇಲೆ ಒತ್ತಡ ಹೇರಿ ರಾಗಿ ಖರೀದಿಯ ಬಾಕಿ ಹಣವನ್ನು ಶೀಘ್ರ ಬಿಡುಗಡೆಗೊಳಿಸುವಂತೆ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.

— ವರದಿ: ಎಂ.ಡಿ. ನಾಸೀರ್, ಅರಸೀಕೆರೆ

Share This Article
Leave a Comment

Leave a Reply

Your email address will not be published. Required fields are marked *