ನೈಜ ವರದಿ ತಯಾರಿಸಲು ಅಧಿಕಾರಿಗಳಿಗೆ ಸೂಚನೆ
ಹಾಸನ ಜಿಲ್ಲೆಯನ್ನು ಬರಪೀಡಿತ ಪ್ರದೇಶ ಎಂದು ಕೇಂದ್ರ ಸರ್ಕಾರದಿಂದ ಘೋಷಣೆ ಮಾಡಿಸುವ ನಿಟ್ಟಿನಲ್ಲಿ ವರದಿ ಸಲ್ಲಿಸಲು ಪೂರ್ಣ ಪ್ರಮಾಣದಲ್ಲಿ ನೈಜ ವರದಿ ತಯಾರಿಸುವಂತೆ ಅಬಕಾರಿ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಎಂ.ಶಿವಲಿAಗೇಗೌಡ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಜಿಲ್ಲಾ ಪಂಚಾಯಿತಿ ಹೊಯ್ಸಳ ಸಭಾಂಗಣದಲ್ಲಿ ಇಂದು ಬರಪರಿಸ್ಥಿತಿ ಹಾಗೂ ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಭೆ ನಡೆಸಿ ಮಾತನಾಡಿದ ಅವರು ಬರ ಪೀಡಿತ ಪ್ರದೇಶ ಎಂದು ಘೋಷಣೆ ಆದ ನಂತರ ಎನ್.ಡಿ.ಆರ್.ಎಫ್ ಮಾರ್ಗಸೂಚಿ ಅನ್ವಯ ಬೆಳೆ ಪರಿಹಾರ ರೈತರಿಗೆ ಕಲ್ಪಿಸಲು ಸಾಧ್ಯವಾಗುತ್ತದೆ ಎಂದರು.
ರೈತರು ವಿಮೆ ಕಟ್ಟಿದ್ದು, ಮಳೆ ಕೊರತೆಯಿಂದ ಬಿತ್ತನೆ ಮಾಡಿದೆ ಇರುವ ರೈತರಿಗೆ ಶೇ.25 ರಷ್ಟು ಪರಿಹಾರ ಹಣವನ್ನು 15 ದಿನದೊಳಗೆ ನೀಡಲು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ರೈತರು ವಿಮೆ ಕಟ್ಟಿದ್ದು, ಬೆಳೆ ನಷ್ಟವಾಗಿರುವ ರೈತರಿಗೆ ಮಧ್ಯಕಾಲಿಕ ಪರಿಹಾರ ನೀಡಲು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರಲ್ಲದೆ, ರೈತರಿಗೆ ಸಂಪೂರ್ಣ ಮಾಹಿತಿ ನೀಡಿ ಎಲ್ಲಾರಿಂದ ವಿಮೆ ಕಟ್ಟಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಈ ಬಾರಿ ಎಷ್ಟು ರೈತರು ಯಾವ ಯಾವ ಬೆಳೆಗೆ ವಿಮೆ ಕಟ್ಟಿದ್ದಾರೆ ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಮುಸುಕಿನ ಜೋಳ ಬೆಳೆಗೆ ಬಿಳಿಸುಳಿ ರೋಗ ಬಂದಿರುವುದರಿAದ ರೈತರಿಗೆ ಎರಡು ರೀತಿಯಲ್ಲಿ ನಷ್ಟ ಉಂಟಾಗಿದೆ ಒಂದು ಜೋಳದಿಂದ ಬರುತಿದ್ದ ಆರ್ಥಿಕ ಲಾಭ ಹಾಗೂ ಹೈನುಗಾರಿಕೆಗೆ ನೆರವಾಗಿದ್ದ ಜಾನುವಾರುಗಳ ಮೇವಿಗು ಸಹ ತೊಂದರೆಯಾಗಿದೆ ಎಂದ ಅವರು ಸಂಕಷ್ಟಕ್ಕೆ ಸಿಲುಕಿರುವ ರೈತರಿಗೆ ಪರಿಹಾರ ಒದಗಿಸಬೇಕಿದೆ ಎಂದರಲ್ಲದೆ, ಬಿಳಿಸುಳಿ ರೋಗ ಯಾವ ಕಾರಣಕ್ಕೆ ಬಂದಿದೆ ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿ ನೀಡಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಮುಸುಕಿನ ಜೋಳ ಬೆಳೆ ಬಿಳಿಸುಳಿ ರೋಗದಿಂದ ನಾಶವಾಗಿರುವುದರಿಂದ ಜಾನುವಾರುಗಳಿಗೆ ಮೇವಿನ ಅಭಾವ ಸೃಷ್ಟಿಯಾಗುತ್ತದೆ, ಈ ನಿಟ್ಟಿನಲ್ಲಿ ನೀರಾವರಿ ಸೌಲಭ್ಯ ಹೊಂದಿರುವ ರೈತರಿಗೆ ಮೇವಿನ ಕಿರು ಪೊಟ್ಟಣಗಳನ್ನು ನೀಡಿ ಮೇವು ಬೆಳೆಯಲು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲೆಯಲ್ಲಿ ಮಳೆ ಕೊರತೆ, ಜಲಾಶಯಗಳಲ್ಲಿ ನೀರಿನ ಲಭ್ಯತೆ ಮತ್ತಿತರ ವಿಷಯಗಳ ಕುರಿತು ಜಿಲ್ಲಾಧಿಕಾರಿ ಲತಾ ಕುಮಾರಿ ಸಭೆಯಲ್ಲಿ ವಿವರಿಸಿದರು.
ಸಂಸದರಾದ ಶ್ರೇಯಸ್ ಎಂ ಪಟೇಲ್, ಶಾಸಕರುಗಳಾದ ಸಿ.ಎನ್ ಬಾಲಕೃಷ್ಣ, ಸಿಮೆಂಟ್ ಮಂಜು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶುಭನ್ವಿತಾ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶುಭಂ ಶುಕ್ಲಾ, ಉಪ ಅರಣ್ಯ ಸಂರಕ್ಷಣಾಧಿಕಾರಿ ಸೌರಭ್ ಕುಮಾರ್, ಅಪರ ಜಿಲ್ಲಾಧಿಕಾರಿ ಕೃಷ್ಣಮೂರ್ತಿ ಉಪಸ್ಥಿತರಿದ್ದರು.
***********-
ನೈಜ ವರದಿ ತಯಾರಿಸಲು ಅಧಿಕಾರಿಗಳಿಗೆ ಸೂಚನೆ
Leave a Comment
