ತಡೆಹಿಡಿದ ಮಾಸಾಶನ ಬಿಡುಗಡೆಗೆ ಸರ್ಕಾರದ ನಿರ್ಧಾರ*

ಉಮೇಶ್ ಬಾಣಾವರ
Disclosure: This website may contain affiliate links, which means I may earn a commission if you click on the link and make a purchase. I only recommend products or services that I personally use and believe will add value to my readers. Your support is appreciated!

*ತಡೆಹಿಡಿದ ಮಾಸಾಶನ ಬಿಡುಗಡೆಗೆ ಸರ್ಕಾರದ ನಿರ್ಧಾರ*
*ಜನರ ಸಂಕಷ್ಟಕ್ಕೆ ಸ್ಪಂದಿಸಿದ ಸರ್ಕಾರ: ವೈ.ಎಸ್.ವಿ. ದತ್ತಾ*

ರಾಜ್ಯದಲ್ಲಿ ಆದಾಯ ಮಿತಿ ಕಾರಣಕ್ಕೆ ತಡೆಹಿಡಿಯಲಾಗಿದ್ದ ಸಾಮಾಜಿಕ ಭದ್ರತಾ ಯೋಜನೆಗಳ ಮಾಸಾಶನವನ್ನು ಫಲಾನುಭವಿಗಳಿಗೆ ಬಿಡುಗಡೆ ಮಾಡಲು ಸರ್ಕಾರ ನಿರ್ಧರಿಸಿದೆ ಎಂದು ಮಾಜಿ ಶಾಸಕ ವೈ.ಎಸ್.ವಿ. ದತ್ತಾ ತಿಳಿಸಿದರು.

ಕಡೂರು ತಾಲೂಕಿನ ಎಗಟಿ ಗ್ರಾಮದ ಶ್ರೀ ವೀರನಾರಾಯಣ ದೇವಸ್ಥಾನದ ಆವರಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸುಮಾರು ಆರು ವರ್ಷಗಳ ಹಿಂದೆ ಜಾರಿಗೊಂಡಿದ್ದ ಅವೈಜ್ಞಾನಿಕ ವರದಿ ಹಾಗೂ ಆದೇಶದ ಹಿನ್ನೆಲೆಯಲ್ಲಿ ಆದಾಯ ಮಿತಿ ಅನ್ವಯಿಸಿ ಹಲವು ಫಲಾನುಭವಿಗಳ ಮಾಸಾಶನವನ್ನು ತಡೆಹಿಡಿಯಲಾಗಿತ್ತು. ಇದರಿಂದ ಸಂಧ್ಯಾ ಸುರಕ್ಷಾ ಯೋಜನೆ, ವಿಧವಾ ವೇತನ, ಅಂಗವಿಕಲರ ವೇತನ ಸೇರಿದಂತೆ ವಿವಿಧ ಸಾಮಾಜಿಕ ಭದ್ರತಾ ಯೋಜನೆಗಳ ಫಲಾನುಭವಿಗಳು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದರು ಎಂದು ಹೇಳಿದರು.

ಆದಾಯ ಮಿತಿ ಸಡಿಲಿಕೆ ಸೇರಿದಂತೆ ತಡೆಹಿಡಿದಿರುವ ಮಾಸಾಶನವನ್ನು ಮರು ಬಿಡುಗಡೆ ಮಾಡುವಂತೆ ಪಕ್ಷಾತೀತವಾಗಿ ಚಿಕ್ಕಮಗಳೂರು ಜಿಲ್ಲಾಧಿಕಾರಿ ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿತ್ತು. ಗ್ರಾಮಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ರೈತರು ಹಾಗೂ ಸಾರ್ವಜನಿಕರು ತಮ್ಮ ಮಾಸಾಶನ ತಡೆಹಿಡಿದಿರುವ ಕುರಿತು ಅಳಲು ತೋಡಿಕೊಂಡ ಹಿನ್ನೆಲೆಯಲ್ಲಿ ಈ ವಿಚಾರವನ್ನು ಅಧಿಕಾರಿಗಳ ಗಮನಕ್ಕೆ ತರಲಾಗಿತ್ತು. ಮನವಿಗೆ ಸರ್ಕಾರ ಸ್ಪಂದಿಸಿ ಹಣ ಬಿಡುಗಡೆ ಮಾಡಲು ನಿರ್ಧರಿಸಿರುವುದು ಸಂತಸದ ವಿಚಾರ ಎಂದು ದತ್ತಾ ಹೇಳಿದರು.

“ಈ ನಿರ್ಧಾರ ಹೊಸದಾಗಿ ಅರ್ಜಿ ಸಲ್ಲಿಸುವವರಿಗೆ ಅನ್ವಯಿಸುವುದಿಲ್ಲ. ಈಗಾಗಲೇ ಮಾಸಾಶನ ಪಡೆಯುತ್ತಿದ್ದವರ ಹಣವನ್ನು ತಡೆಹಿಡಿದಿರುವ ಪ್ರಕರಣಗಳಿಗೆ ಮಾತ್ರ ಅನ್ವಯಿಸುತ್ತದೆ” ಎಂದು ಅವರು ಸ್ಪಷ್ಟಪಡಿಸಿದರು.
ಕೆರೆಗೆ ನೀರು ಹರಿಸದಿದ್ದರೆ ಪಾದಯಾತ್ರೆ
ಕಡೂರು ತಾಲೂಕಿನ ಕಲ್ಕೆರೆ–ಕುಕ್ ಸಮುದ್ರ ಕೆರೆಗೆ ನೀರು ಹರಿಸುವ ವಿಚಾರದಲ್ಲಿಯೂ ಸರ್ಕಾರ ಹಾಗೂ ಅಧಿಕಾರಿಗಳು ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ದತ್ತಾ ಆಗ್ರಹಿಸಿದರು.

ಕೆರೆಗೆ ನೀರು ಹರಿಸುವ ಕುರಿತು ಜಲಸಂಪನ್ಮೂಲ ನಿಗಮದ ಅಧಿಕಾರಿಗಳು ಹಾಗೂ ಸರ್ಕಾರದ ಸಚಿವರು ಈ ತಿಂಗಳ ಕೊನೆಯಲ್ಲಿ ನೀರು ಹರಿಸುವುದಾಗಿ ಭರವಸೆ ನೀಡಿದ್ದಾರೆ. ಈ ಭರವಸೆಯನ್ನು ಕಾದು ನೋಡಲಾಗುವುದು. ನಿಗದಿತ ಅವಧಿಯಲ್ಲಿ ನೀರು ಹರಿಸದಿದ್ದರೆ ಕಡೂರಿನಿಂದ ಚಿಕ್ಕಮಗಳೂರು ಜಿಲ್ಲಾಧಿಕಾರಿ ಕಚೇರಿವರೆಗೆ ಪಾದಯಾತ್ರೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

*ಬರದ ಛಾಯೆಯಲ್ಲಿ ರೈತರು*:
*ಸರ್ಕಾರದ ವಿರುದ್ಧ ಅಸಮಾಧಾನ*

ರಾಜ್ಯದಲ್ಲಿ ಈ ಬಾರಿ ಮಳೆ ಸಮರ್ಪಕವಾಗಿ ಹಾಗೂ ಸಮಯಕ್ಕೆ ಸರಿಯಾಗಿ ಆಗಿಲ್ಲ. ಪರಿಣಾಮ ರೈತರು ಬರದ ಛಾಯೆಯಲ್ಲಿ ಸಂಕಷ್ಟ ಅನುಭವಿಸುತ್ತಿದ್ದಾರೆ. ಆದರೆ ವಿಧಾನಸಭೆಯಲ್ಲಿಯೂ ಬರಗಾಲದ ಕುರಿತು ಸಮರ್ಪಕ ಚರ್ಚೆ ನಡೆದಿಲ್ಲ. ರೈತರ ಸಮಸ್ಯೆಗಳ ಬಗ್ಗೆ ಸರ್ಕಾರ ಕಿಂಚಿತ್ತೂ ಗಮನ ಹರಿಸದಿರುವುದು ಬೇಸರದ ಸಂಗತಿ ಎಂದು ದತ್ತಾ ಅಸಮಾಧಾನ ವ್ಯಕ್ತಪಡಿಸಿದರು.
ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಬರ ಪರಿಸ್ಥಿತಿಯ ಕುರಿತು ಜಿಲ್ಲಾಧಿಕಾರಿಗಳಿಂದ ಸರ್ಕಾರಕ್ಕೆ ಸಮಗ್ರ ವರದಿ ಸಲ್ಲಿಕೆಯಾಗಿದೆಯೇ ಎಂಬುದರ ಬಗ್ಗೆಯೂ ಪರಿಶೀಲನೆ ಅಗತ್ಯವಿದೆ. ಬರಗಾಲದ ವಾಸ್ತವ ಪರಿಸ್ಥಿತಿಯನ್ನು ಜಿಲ್ಲಾಧಿಕಾರಿಗಳು ಸರ್ಕಾರದ ಗಮನಕ್ಕೆ ತಂದು, ರೈತರ ನೆರವಿಗೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಅವರು ಮನವಿ ಮಾಡಿದರು.

ರೈತರ ಸಮಸ್ಯೆ ಹಾಗೂ ಬರಗಾಲದ ವಿಚಾರದಲ್ಲಿ ಪಕ್ಷಾತೀತವಾಗಿ ಹೋರಾಟ ಮುಂದುವರಿಸಲಾಗುವುದು ಎಂದು ವೈ.ಎಸ್.ವಿ. ದತ್ತಾ ತಿಳಿಸಿದರು.

*ಪತ್ರಿಕಾಗೋಷ್ಠಿಯಲ್ಲಿ ಮಾಜಿ ಪುರಸಭಾಧ್ಯಕ್ಷ ಭಂಡಾರಿ ಶ್ರೀನಿವಾಸ್, ಯಾರದೋ ಕೆರೆ ರಾಜಣ್ಣ, ಬೀಳುವಾಳ ಪ್ರಕಾಶ್, ಚಿಕ್ಕಬಾಸು, ಕುಮಾರ್, ಪ್ರಶಾಂತ್, ರವಿಶಂಕರ್, ನಿಂಗಪ್ಪ, ಮೋಹನ್ ಹಾಗೂ ಕಾಂತರಾಜು ಸೇರಿದಂತೆ ಹಲವರು ಉಪಸ್ಥಿತರಿದ್ದರು*.

Share This Article
Leave a Comment

Leave a Reply

Your email address will not be published. Required fields are marked *