ಅರಸೀಕೆರೆ: ಯಾರು ಏನೇ ಟೀಕೆ ಟಿಪ್ಪಣಿ, ನಿಂದನೆ ಮಾಡಿದರೂ ನೈಜತೆ, ಸಿದ್ಧಾಂತ ಯಾರೂ ಏನೂ ಮಾಡಲಾಗುವುದಿಲ್ಲ ಎಂದು ಕರ್ನಾಟಕ ಗೃಹಮಂಡಳಿ ಅಧ್ಯಕ್ಷರೂ ಆದ ಸ್ಥಳೀಯ ಶಾಸಕ ಕೆ.ಎಂ.ಶಿವಲಿಂಗೇಗೌಡ ಹೇಳಿದರು.
ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷರು ಹಾಗೂ ಪದಗ್ರಹಣ ಕಾರ್ಯಕ್ರಮದಲ್ಲಿ ಎಲ್ಲರನ್ನೂ ಅಭಿನಂದಿಸಿ ಅವರು ಮಾತನಾಡಿದರು.
ಸಾರ್ವಜನಿಕ ಅಥವಾ ಸಂಘದ ಕೆಲಸ ಮಾಡಲು ಗೆದ್ದವರಿಗೆ ಜವಾಬ್ದಾರಿ ವಹಿಸುವುದು ಒಳ್ಳೆಯ ಸಂಪ್ರದಾಯ, ಅರ್ಥಪೂರ್ಣ ಎಂದರು.
ಅದಕ್ಕೆ ತಕ್ಕಂತೆ ನಡೆಸಿಕೊಂಡು ಹೋಗದೇ ಇದ್ರೆ ಅರ್ಥ ಇರಲ್ಲ, ಅಧಿಕಾರ ಪಡೆದವರು ಮುನ್ನುಗ್ಗಿ ಕೆಲಸ ಮಾಡಬೇಕು, ಟೀಕೆ-ಟಿಪ್ಪಣಿ ಸಾಮಾನ್ಯ.ನಮ್ಮ ಕರ್ತವ್ಯ ನಾವು ಮಾಡಬೇಕು ಎಂದು ತಿಳಿ ಹೇಳಿದರು.
ಎಲ್ಲದಕ್ಕೂ ನಾವು ಮಾಡುವ ಕೆಲಸ, ನಡವಳಿಕೆ ಉತ್ತರ ನೀಡಲಿದೆ ಎಂದರು.
ಮುದ್ರಣ ಮಾಧ್ಯಮಕ್ಕೆ ಅದರದೇ ನೀತಿ, ತತ್ವ, ಸಿದ್ಧಾಂತ, ಘನತೆ ಇದ್ದು, ಅದನ್ನು ಉಳಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಶಿವಾನಂದ ತಗಡೂರು ಅವರು ಪತ್ರಕರ್ತರ ಸಂಘಟನೆ ವಿಚಾರದಲ್ಲಿ ಮಹತ್ವದ ಕೆಲಸ ಮಾಡುತ್ತಿದ್ದಾರೆ.
ಹಾಸನ, ಅರಸೀಕೆರೆಯಲ್ಲೂ ಹಾಗೆಯೇ ಆಗಬೇಕು. ನಿಂದಕರಿಗೆ ಚಿಂತೆ ಮಾಡಬೇಡಿ ಎಂದರು.
ತಾಲೂಕು ಪತ್ರಕರ್ತರ ಸಂಘದ ಕಟ್ಟಡ ಕಾಮಗಾರಿ ಈಗಲೇ ಆರಂಭಿಸಿ, ಫೌಂಡೇಶನ್ ನಿರ್ಮಾಣಕ್ಕೆ 25 ಲಕ್ಷ ರೆಡಿ ಇದೆ ಎಂದರು.
ಒಂದು ವರ್ಷದ ಒಳಗೆ ಭವನ ಪೂರ್ಣ ಆಗಲಿ ಎಂದು ಹೇಳಿದರು.
ಎಲ್ಲರೂ ಉತ್ತಮವಾಗಿ ಕೆಲಸ ಮಾಡುವ ಮೂಲಕ
ಪತ್ರಿಕಾ ಧರ್ಮ ಉಳಿಸಿಕೊಂಡು ಹೋಗಿ ಎಂದು ಕಿವಿ ಮಾತು ಹೇಳಿದರು.
ಕೆಯೂಡಬ್ಲ್ಯೂಜೆ ರಾಜ್ಯಾಧ್ಯಕ್ಷ
ಶಿವಾನಂದ ತಗಡೂರು ಮಾತನಾಡಿ,ಹೊಸ ಪದಾಧಿಕಾರಿಗಳಿಗೆ ಪೂರ್ಣ ಸಹಕಾರ ಕೊಡಿ, ಅಭಿವೃದ್ಧಿ ಗೆ ಬೆಂಬಲ ಎಲ್ಲರ ಸಹಕಾರ ಇರಲಿ, ಅಧಿಕಾರ ಇದ್ದಾಗ ಸಂಘ ಬೇಕು, ಇಲ್ಲದಿದ್ದಾಗ ಬೇಡ ಎಂಬ ಧೋರಣೆ ಬೇಡ. ಯಾರೂ ಮುಖ್ಯ ಅಲ್ಲ, ಅಮುಖ್ಯ ಅಲ್ಲ, ಪ್ರತಿಯೊಬ್ಬರು ಶಿಸ್ತಿನ ಚೌಕಟ್ಟು ಪಾಲಿಸಿ, ಇಲ್ಲದಿದ್ದರೆ ಕ್ರಮ ಅನಿವಾರ್ಯ ಎಂದು ಎಚ್ಚರಿಕೆ ನೀಡಿದರು.
ಎಲ್ಲರೂ ಅಧ್ಯಕ್ಷರ ಜೊತೆಯಲ್ಲಿ ಹೋಗಿ, ತಪ್ಪು ಮಾಡಿದರೆ ಪ್ರಶ್ನೆ ಮಾಡಿ ಎಂದರು.
ಶಾಸಕರು ಕ್ಯಾಬಿನೆಟ್ ನಲ್ಲಿ ಅನುಮತಿ ಕೊಡಿಸಿ ನಿವೇಶನ ನೀಡಿದ್ದಾರೆ. ಸಹಾಯ ಮಾಡಿದವರ ಮರೆಯಬೇಡಿ, ಭವನ ಕಟ್ಟುವುದರ ಜೊತೆಗೆ ಮನಸು, ಹೃದಯಗಳನ್ನೂ ಕಟ್ಟಬೇಕಿದೆ ಎಂದರು.
ಅರಸೀಕೆರೆ ಪತ್ರಿಕೋದ್ಯಮಕ್ಕೆ ದೊಡ್ಡ ಇತಿಹಾಸ ಇದೆ, ಉಳಿಸಿ ಬೆಳೆಸಿಕೊಂಡು ಹೋಗಿ, ನಮ್ಮ ವೃತ್ತಿ ಗೌರವ ಎತ್ತಿ ಹಿಡಿದರೆ ವ್ಯಕ್ತಿತ್ವಕ್ಕೆ ಮೆರುಗು ಬರಲಿದೆ ಅದಕ್ಕೆ ಗೌರವ ನೀಡಿದರೆ ತಾಕತ್ತು ಹೆಚ್ಚಲಿದೆ ಎಂದು ನುಡಿದರು.
ರಾಜ್ಯ ಉಪಾಧ್ಯಕ್ಷರಾದ ಹೆಚ್.ಬಿ.ಮದನಗೌಡ ಮಾತನಾಡಿ, ಗೆದ್ದವರಿಗೆ ಶುಭಾಶಯಗಳು, ಸಕ್ರಿಯವಾಗಿರುವ ಪತ್ರಕರ್ತರನ್ನು ಹೊರ ಗಿಡುವ ಕೆಲಸ ಬೇಡ, ಹಿರಿಯರು ಕಟ್ಟಿದ ಸಂಸ್ಥೆ, ಉತ್ತಮವಾಗಿ ಹೋಗಲಿ, ಶೀಘ್ರ ಭವನ ಕಟ್ಟಿ ಎಂದು ಸಲಹೆ ನೀಡಿದರು.
ಕೆಯುಡಬ್ಲ್ಯೂಜೆ ಮುಂಬೈ ಕಾಸರಗೋಡಿನಲ್ಲೂ ಘಟಕ ಹೊಂದಿದೆ.ಮುಂದೆ ದೆಹಲಿಯಲ್ಲೂ ಘಟಕ ಆಗುತ್ತಿದೆ, ಇದಕ್ಕೆ ಕಾರಣ ಶಿವಾನಂದ ತಗಡೂರು, ಮೊದಲು ಸಂಘ ಅಂದ್ರೆ ಕಾಮಿಡಿ, ಹಾಸ್ಯ ಮಾಡೋರು, ಈಗ ಮಾದರಿ ಎನಿಸಿದೆ. ಸಂಘ ಉಳಿದರಷ್ಟೇ ನಾವು, ಹಿಂದಿನಿಂದಲೂ ಅನೇಕರ ಶ್ರಮದಿಂದ ಇಂದು ೯ ಸಾವಿರ ಕಾರ್ಯನಿರತ ಪತ್ರಕರ್ತರು ಇದ್ದಾರೆ ಎಂದು ವಿವರಿಸಿದರು.
ಮೈಸೂರು ಒಡೆಯರು ಅನುದಾನ ಕೊಟ್ಟ, ಡಿವಿಜಿ ಅವರು ಕಟ್ಟಿದ ಸಂಘ, ಅನೇಕರು ಆಳಿದ್ದಾರೆ. ಅದಕ್ಕೀಗ ಹೆಗಲಾದವರು ಶಿವಾನಂದ ತಗಡೂರು, ಅವರ ನೇತೃತ್ವದಲ್ಲೇ ಶತಮಾನೋತ್ಸವ ಸಮಾರಂಭ ಆಗಬೇಕು ಎಂದು ಮೂರನೇ ಬಾರಿ ಅಧ್ಯಕ್ಷರನ್ನಾಗಿ ಮಾಡಲಾಗಿದೆ ಎಂದರು.
ಜಿಲ್ಲಾಧ್ಯಕ್ಷರಾದ ಜೆ.ಆರ್.ಕೆಂಚೇಗೌಡ ಮಾತನಾಡಿ, ಸಂಘ ಸದೃಢ ಗೊಳ್ಳಬೇಕು, ಹಿಂದಿನ ಗೌರವ ಉಳಿಬೇಕು ಅಂದ್ರೆ ಪತ್ರಕರ್ತರು ಪರಿಶುದ್ಧನಾಗಬೇಕು. ಹಣ ವಸೂಲಿ ಪ್ರಕರಣ ಸಂಬಂಧ ಜಿಲ್ಲೆಯಲ್ಲಿ ಎಸ್ಪಿ ಅವರಿಗೆ ದೂರು ನೀಡಿದ್ದೇವೆ, ಮುಂದೆ ಎಲ್ಲೆಡೆ ಈ ಕೆಲಸ ಆಗಬೇಕು. ಕಾನೂನು ವಿರೋಧಿ ಚಟುವಟಿಕೆಗೆ ಅವಕಾಶ ನೀಡಿದರೆ ನಿಮ್ಮ ಗೌರವಕ್ಕೆ ಧಕ್ಕೆ ಆಗಲಿದೆ ಎಂದು ಎಚ್ಚರಿಸಿದರು.ಅಗತ್ಯ ಬಿದ್ದರೆ ಹಿರಿಯರನ್ನು ಒಳಗೊಂಡ ಸಮನ್ವಯ ಸಮಿತಿ ಮಾಡಿಕೊಳ್ಳಿ ಎಂದು ಸಲಹೆ ನೀಡಿದರು.
ಮಾಜಿ ಅಧ್ಯಕ್ಷರಾದ
ರವಿ ನಾಕಲಗೂಡು ಮಾತನಾಡಿ, ಚುನಾವಣೆಯಲ್ಲಿ ಸೋಲು ಗೆಲುವು ಸಹಜ ಗೆದ್ದವರು, ಸೋತವರು ನಮ್ಮವರೆ. ಚುನಾವಣೆಯಲ್ಲಿ ಇದು ಸಹಜ, ಅಪ ಪ್ರಚಾರ ಮಾಡುವುದು ಬೇಡ, ಸೋತವರು ಸಂಘ ವಿರೋಧಿ ಚಟುವಟಿಕೆಯಲ್ಲಿ ತೊಡಗಬೇಡಿ, ಸಂಘಕ್ಕೆ ಸದಸ್ಯರು ಅನಿವಾರ್ಯ ಅಲ್ಲ, ಸಂಘ ಅನಿವಾರ್ಯ ಎಂದರು.
ಅರಸೀಕೆರೆ ಸಂಘದ ನೂತನ ಅಧ್ಯಕ್ಷ ಟಿ.ಆನಂದ್ ಮಾತನಾಡಿ, ಈ ಅವಧಿಯಲ್ಲಿ ಭವನ ನಿರ್ಮಾಣ ಆಗಲಿದೆ. ಎಲ್ಲ ಸದಸ್ಯರನ್ನು ಒಗ್ಗೂಡಿಸಿ ಕರೆದು ಕೊಂಡು ಹೋಗುವ ಬಯಕೆ ನನ್ನದು, ಆದರೆ ಕೆಲವರು ತೇಜೋವಧೆ, ಬ್ಲಾಕ್ ಮೇಲ್ ಮಾಡುವವರ ಮೇಲೆ ಕ್ರಮ ಆಗಲಿ ಎಂದು ಆಗ್ರಹಿಸಿದರು.
ಜಿಲ್ಲಾ ಸಂಘದ ಪ್ರಧಾನ ಕಾರ್ಯದರ್ಶಿ ಕೆ.ಜಿ.ಸುರೇಶ್, ತಾಲೂಕು ಸಂಘದ ಪ್ರಧಾನ ಕಾರ್ಯದರ್ಶಿ ನವೀನ್ ಕುಮಾರ್, ಉಪಾಧ್ಯಕ್ಷ ಹೇಮಂತ್ ಕುಮಾರ್, ಮಾಡಲು ಸೋಮಣ್ಣ,ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯ ಹಾರನಹಳ್ಳಿ ನಾಗೇಂದ್ರ, ತಾಲೂಕು ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷರುಗಳಾದ ರಾಮಚಂದ್ರ,ಕಣಕಟ್ಟೆ ಕುಮಾರ್, ನಿರ್ದೇಶಕರಾದ ವಿಜಯಕುಮಾರ್,ಜಗದೀಶ್ ರಂಗನಾಥ್, ರವಿಶಂಕರ್, ಸಾಧಿಕ್ ಬಾಣಾವರ ಸೇರಿದಂತೆ ಮತ್ತು ಇತರರು ಉಪಸ್ಥಿತರಿದ್ದರು.







