Home ರಾಜಕಾರಣ ಹಿಂದುಳಿದ ವರ್ಗಗಳ ನೇತಾರ ಮಾಜಿ ಮುಖ್ಯಮಂತ್ರಿ ಡಿ ದೇವರಾಜ ಅರಸುರವರ ಜನ್ಮ ದಿನಾಚರಣೆ

ಹಿಂದುಳಿದ ವರ್ಗಗಳ ನೇತಾರ ಮಾಜಿ ಮುಖ್ಯಮಂತ್ರಿ ಡಿ ದೇವರಾಜ ಅರಸುರವರ ಜನ್ಮ ದಿನಾಚರಣೆ

20
0

ಡಿ.ದೇವರಾಜ ಅರಸುರವರು ತಮ್ಮ ಅಧಿಕಾರಾವಧಿಯಲ್ಲಿ ಸಾಮಾಜಿಕ ನ್ಯಾಯ ಹಾಗೂ ಸಮಾನತೆ ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆ. ಮೈಸೂರು ರಾಜ್ಯವನ್ನು ‘ಕರ್ನಾಟಕ’ ಎಂದು ನಾಮಕಾರಣ ಮಾಡುವಲ್ಲಿ ಪ್ರಮುಖ ಪಾತ್ರವಹಿಸಿ, ಸಮಾಜದ ಎಲ್ಲ ವರ್ಗಗಳಿಗೂ ನ್ಯಾಯ ಒದಗಿಸಲು ಶ್ರಮಿಸಿದ್ದರು.

ಅರಸು ಅವರು ಎಂಟು ವರ್ಷಗಳ ಕಾಲ ಈ ರಾಜ್ಯದ ಮುಖ್ಯಮಂತ್ರಿಗಳಾಗಿದ್ದರು. ಅವರ ನಂತರ ಹೆಚ್ಚು ವರ್ಷಗಳ ಕಾಲ ಮುಖ್ಯಮಂತ್ರಿಯಾಗಿದ್ದು ನಾನೇ. ಅವರಂತೆ ನಾನೂ ಮುಖ್ಯಮಂತ್ರಿಯಾಗಿ 5 ವರ್ಷಗಳನ್ನು ಪೂರೈಸಿದ್ದೇನೆ. ಈ ವಿಚಾರದಲ್ಲಿ ನಮ್ಮಿಬ್ಬರಿಗೂ ಸಾಮ್ಯತೆ ಇದೆ. ದೇವರಾಜ ಅರಸು ಅವರು ರಾಜಕೀಯ ಸ್ವಾತಂತ್ರ್ಯಕ್ಕೆ ಅರ್ಥ ಬರಲು ಸಾಮಾಜಿಕ, ಆರ್ಥಿಕ ಸ್ವಾತಂತ್ರ್ಯ ದೊರಕಬೇಕೆಂದು ನಂಬಿದ್ದರು. ಇವುಗಳಿಲ್ಲದೇ ರಾಜಕೀಯ ಸ್ವಾತಂತ್ರ್ಯ ಸಾಧ್ಯವಿಲ್ಲ ಎಂದು ಬಾಬಾ ಸಾಹೇಬ್ ಅಂಬೇಡ್ಕರ್ ಅವರೂ ಹೇಳಿದ್ದರು.

ಪ್ರಬಲರ ವಿರೋಧದ ನಡುವೆಯೂ ಉಳುವವನಿಗೆ ಭೂಮಿ ಎನ್ನುವ ಭೂಸುಧಾರಣಾ ಕಾನೂನನ್ನು ಜಾರಿ ಮಾಡುವುದು ಸುಲಭದ ಮಾತಾಗಿರಲಿಲ್ಲ. ಹಾವನೂರು ಆಯೋಗವನ್ನು ರಚಿಸಿ ಹಿಂದುಳಿದವರಿಗೆ ಉದ್ಯೋಗ ಹಾಗೂ ಶಿಕ್ಷಣದಲ್ಲಿ ಮೀಸಲಾತಿ ಜಾರಿ ಮಾಡಿದ್ದನ್ನು ಮೆಚ್ಚಲೇಬೇಕಾದ ಕೆಲಸ. ವಿಧಾನಸೌಧ ಕೆಲವೇ ಜನರ ಪ್ರಾತಿನಿಧಿಕ ಸಭೆಯಾಗಿರುವುದನ್ನು ಮನಗಂಡ ಅರಸುರವರು ಹಿಂದುಳಿದವರೂ ವಿಧಾನಸೌಧದ ಮೆಟ್ಟಿಲನ್ನು ಹತ್ತುವಂತೆ ಮಾಡಿದರು. ಜೀತಪದ್ಧತಿ ಹಾಗೂ ಮಲಹೊರುವ ಪದ್ಧತಿ ನಿಷೇಧ, ಋಣಪರಿಹಾರ ಕಾಯ್ದೆ ಜಾರಿಗೆ ತಂದರು.

ಅಕ್ಕಿ ಬಳಸುವುದೂ ಶ್ರೀಮಂತರ ಸ್ವತ್ತಾಗಿದ್ದ ಕಾಲದಲ್ಲಿ, ಹಿಂದುಳಿದವರಿಗೆ ಅನ್ನವೂ ಉಣ್ಣುವ ಪರಿಸ್ಥಿರಿಯಿರಲಿಲ್ಲ. ಆದ್ದರಿಂದ ರಾಜ್ಯದಲ್ಲಿ ಯಾರೊಬ್ಬರೂ ಅನ್ನಕ್ಕಾಗಿ ಕೈಯೊಡ್ಡಬಾರದೆಂಬ ಸದುದ್ದೇಶದಿಂದ ಅನ್ನಭಾಗ್ಯ ಯೋಜನೆಗೆಯನ್ನು ನಾನು ಜಾರಿಗೆ ತಂದೆನು. ಪ್ರಸ್ತುತ ಅನ್ನಭಾಗ್ಯಯೋಜನೆಯಡಿ 10 ಕೆಜಿ ಅಕ್ಕಿ ನೀಡಲಾಗುತ್ತಿದೆ.

ಗ್ಯಾರಂಟಿಗಳಿಂದ ಕರ್ನಾಟಕ ಆರ್ಥಿಕವಾಗಿ ದಿವಾಳಿಯಾಗುತ್ತದೆ ಎಂದು ಹಲವು ಟೀಕೆಗಳು ಕೇಳಿಬಂದವು. 2013-14 ರಲ್ಲಿ 1,04,000 ರೂ. ಇದ್ದ ತಲಾದಾಯ, 2024-25 ರಲ್ಲಿ 2,05,000 ರೂ.ಗಳಾಗಿದೆ. ಇಡೀ ದೇಶದಲ್ಲಿ ಕರ್ನಾಟಕ ತಲಾ ಆದಾಯದಲ್ಲಿ ನಂಬರ್ 01 ಸ್ಥಾನದಲ್ಲಿದೆ. ಗ್ಯಾರಂಟಿ ಯೋಜನೆಗಳಿಂದ ಇಂತಹ ಸಾಧನೆ ಸಾಧ್ಯವಾಗಿದೆ.

ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರ ಜನ್ಮ ದಿನವೂ ಇಂದೇ ಆಗಿದೆ. ಅವರು ಭಾರತವನ್ನು 21ನೇ ಶತಮಾನಕ್ಕೆ ಕೊಂಡೊಯ್ಯಲು ಪ್ರಯತ್ನಿಸಿದ ಮೇರು ನಾಯಕರಾಗಿದ್ದರು. ಮಹಿಳೆಯರಿಗೆ, ಹಿಂದುಳಿದವರು, ಅಲ್ಪಸಂಖ್ಯಾತರಿಗೆ ಸ್ಥಳೀಯ ಸಂಸ್ಥೆಗಳಲ್ಲಿ ಮೀಸಲಾತಿ ತರಲು ಸಂವಿಧಾನದಲ್ಲಿ ತಿದ್ದುಪಡಿ ತಂದರು. ಲೋಕಸಭೆ ಹಾಗೂ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ.33 ರಷ್ಟು ಮೀಸಲಾತಿ ಕಲ್ಪಿಸಲು ರಾಜೀವ್ ಗಾಂಧಿಯವರೇ ಮೂಲ ಕಾರಣ. ಸಮಾಜದ ಪರಿವರ್ತನೆಗೆ ಶ್ರಮವಹಿಸಿರುವವರನ್ನು ಸ್ಮರಿಸುವುದು ನಮ್ಮೆಲ್ಲರ ಕರ್ತವ್ಯ. ಆದ್ದರಿಂದ ದೇವರಾಜ ಅರಸ್ ಹಾಗೂ ರಾಜೀವ್ ಗಾಂಧಿಯಂತಹ ಮಹಾನ್ ಚೇತನಗಳು ಹಾಕಿಕೊಟ್ಟ ದಾರಿಯಲ್ಲಿ ನಡೆಯುವ ಮೂಲಕ ಅವರಿಗೆ ಗೌರವ ಸಲ್ಲಿಸಬೇಕಾಗಿದೆ.

ದೇವರಾಜ ಅರಸು ಅವರ ಹೆಸರಿನಲ್ಲಿ ಸರ್ಕಾರ ಪ್ರಶಸ್ತಿಯನ್ನು ನೀಡುತ್ತಿದ್ದು, ಈ ವರ್ಷ ಹಿರಿಯ ಪತ್ರಕರ್ತರಾದ ಕಲ್ಲೆ ಶಿವೋತ್ತಮ ರಾವ್ ಅವರು ಆಯ್ಕೆಯಾಗಿರುವುದು ಸಂತೋಷದ ವಿಚಾರ. ಅವರಿಗೆ ಬಹಳ ಹಿಂದೆಯೇ ಈ ಪ್ರಶಸ್ತಿ ದೊರೆಯಬೇಕಿತ್ತು. ಯೋಗ್ಯ ವ್ಯಕ್ತಿಯನ್ನು ಆಯ್ಕೆ ಮಾಡಿರುವುದು ನನಗೆ ಅತೀವ ಸಂತಸ ತಂದಿದೆ. ಕಲ್ಲೆ ಶಿವೋತ್ತಮ ರಾವ್ ಅವರೂ ಸಮಾಜವಾದಿ ಹಿನ್ನೆಲೆಯಿಂದ ಬಂದವರು. ಅನೇಕ ಪತ್ರಿಕೆಗಳಲ್ಲಿ ಕೆಲಸ ಮಾಡಿದ್ದು, ಸರ್ಕಾರವನ್ನು ಯಾವುದೇ ಮುಲಾಜಿಲ್ಲದೇ ನೇರವಾಗಿ ಟೀಕಿಸುತ್ತಿದ್ದರು. ನನ್ನನ್ನೂ ಕೂಡ ಟೀಕಿಸಿದ್ದಾರೆ. ಅವರಿಗೆ ಸರ್ಕಾರದ ಪರವಾಗಿ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಕಲ್ಲೆ ಶಿವೋತ್ತಮ ರಾವ್ ಅವರಿಗೆ 96 ವರ್ಷಗಳಾಗಿದ್ದು, ಅವರು ನೂರು ವರ್ಷಕ್ಕೂ ಹೆಚ್ಚು ಕಾಲ ಬಾಳಲಿ ಎಂದು ಹಾರೈಸುತ್ತೇನೆ.

– ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಆಯೋಜಿಸಿದ್ದ ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಅವರ 110 ನೇ  ಜನ್ಮದಿನಾಚರಣೆ ಹಾಗೂ ದೇವರಾಜ ಅರಸು ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

LEAVE A REPLY

Please enter your comment!
Please enter your name here