ಹಾಸನ ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಪಟಾಕಿ ಮಾರಾಟ ಮಾಡಲು ತಾತ್ಕಾಲಿಕ ಪರವಾನಗಿ ಪಡೆದು ಮಾರಾಟ ಮಾಡುವ ಸಂದರ್ಭದಲ್ಲಿ ಅಗತ್ಯ ಸುರಕ್ಷತಾ ಕ್ರಮಗಳನ್ನು ಅನುಸರಿಸುವಂತೆ ಜಿಲ್ಲಾಧಿಕಾರಿ ಲತಾ ಕುಮಾರಿ ಅವರು ಸೂಚಿಸಿದ್ದಾರೆ.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಇಂದು ನಡೆದ ಪಟಾಕಿ ಮಾರಾಟ ಕುರಿತು ನಡೆದ ಸಭೆ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು ಜಿಲ್ಲಾ ಮಟ್ಟದಲ್ಲಿ ಒಂದು ಸಮಿತಿ ರಚಿಸಿ ಅವರ ಕರ್ತವ್ಯ ಮತ್ತು ಜವಾಬ್ದಾರಿ ನಿರ್ವಹಣೆಗೆ ಕ್ರಮವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಅ.19 ರಿಂದ 22 ವರೆಗೆ ಬೆಳಗ್ಗೆ 9.30 ರಿಂದ ಸಂಜೆ 7.30 ವರೆಗೆ ಮಾತ್ರ ಮಾರಾಟ ಮಾಡಬೇಕು. ಎಸ್.ಎಂ.ಕೃಷ್ಣ ನಗರದ ಸಿ.ಐ.ಟಿ.ಬಿ. ವ್ಯಾಪ್ತಿಯಲ್ಲಿರುವ ಖಾಲಿ ಪ್ರದೇಶದ ನಿಗಧಿತ ಸ್ಥಳದಲ್ಲಿ ಮಾರಾಟ ಮಾಡಬೇಕು, ಹಸಿರು ಪಟಾಕಿಗಳನ್ನು ಮಾತ್ರ ಮಾರಾಟ ಮಾಡಬೇಕು. ಸ್ವಚ್ಚತೆಗೆ ಕ್ರಮವಹಿಸಬೇಕು ಹಾಗೂ ಪ್ರವೇಶ ಮತ್ತು ನಿರ್ಗಮನ ದ್ವಾರದಲ್ಲಿ ಸಿ.ಸಿ.ಕ್ಯಾಮರ ಅಳವಡಿಸಬೇಕು ಎಂದು ತಿಳಿಸಿದರು.
ಪರವಾನಗಿ ಪಡೆಯದೆ ಕಾನೂನು ಬಾಹಿರವಾಗಿ ಪಟಾಕಿ ಮಾರಾಟ ಮಾಡುವುದು ಕಂಡುಬAದಲ್ಲಿ ತಕ್ಷಣ ಪ್ರಕರಣ ದಾಖಲಿಸಿ ಉಲ್ಲಂಘನೆ ಮಾಡಿದವರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಪಟಾಕಿ ಮಾರಾಟ ಮಾಡಲು ತಾತ್ಕಾಲಿಕ ಪರವಾನಗಿ ಪಡೆಯುವವರು ಎ.ಬಿ.ಸಿ.ಪೌಡರ್ ನಿರ್ವಹಣೆ ಬಗ್ಗೆ ಅಂಗಡಿ ಮಳಿಗೆ ತೆರೆಯುವ ಮುಂಚೆ ಕಡ್ಡಾಯವಾಗಿ ಅಗ್ನಿಶಾಮಕ ಇಲಾಖೆಯಿಂದ ತರಬೇತಿ ಪಡೆಯುವಂತೆ ತಿಳಿಸಿದರು.
ತಾತ್ಕಾಲಿಕ ಪಟಾಕಿ ಮಾರಾಟ ಪರವಾನಗಿಯು ಕೇವಲ ಪರವಾನಗಿಯಲ್ಲಿ ನಿರ್ದಿಷ್ಟಪಡಿಸಿದ ಅವಧಿಯವರೆಗೆ ಮಾತ್ರ ಚಾಲ್ತಿಯಲ್ಲಿರುತ್ತದೆ. ಸದರಿ ಪರವಾನಗಿಯು ಕೇವಲ ಪಟಾಕಿ ಮಾರಾಟ ಮಾಡುವ ಸಲುವಾಗಿ ನೀಡಲಿದ್ದು, ಯಾವುದೇ ರೀತಿಯ ಪಟಾಕಿಗಳನ್ನು ತಯಾರಿಸುವಂತಿಲ್ಲ ಮತ್ತು ಅವಧಿ ನಂತರ ಮಾರಾಟ ಮತ್ತು ಶೇಖರಣೆ ಮಾಡಬಾರದು ಎಂದು ತಿಳಿಸಿದರು.
ತಾತ್ಕಾಲಿಕ ಪಟಾಕಿ ಮಳಿಗೆಗಳನ್ನು ವೈಜ್ಞಾನಿಕವಾಗಿ ಮಾರ್ಗಸೂಚಿಗಳನ್ವಯ ನಿರ್ಮಾಣ ಮಾಡಬೇಕು. ಎರಡು ಕಡೆಗಳಲ್ಲಿ ಸರಾಗವಾಗಿ ಗಾಳಿಯಾಡುವಂತಿರಬೇಕು ಮತ್ತು ಪ್ರತಿ ಅಂಗಡಿಗಳ ಮಧ್ಯೆ ಕನಿಷ್ಠ 3 ಮೀಟರ್ ಅಂತರವಿರಬೇಕು, ಸುಸಜ್ಜಿತ ವಿದ್ಯುತ್ ಸಂಪರ್ಕವಿರಬೇಕು, ಅಂಗಡಿ ಮುಂಭಾಗ ಮತ್ತು ಹಿಂಭಾಗದಲ್ಲಿ ಪ್ರವೇಶ ವ್ಯವಸ್ಥೆ ಇರಬೇಕು ಎಂದು ತಿಳಿಸಿದರು.
ತಾತ್ಕಾಲಿಕ ಪ್ರತಿ ಅಂಗಡಿ ಮಳಿಗೆಗಳಲ್ಲಿ ಬೆಂಕಿಯನ್ನು ತಡೆಗಟ್ಟಬಹುದಾದ ಸಾಧನಗಳನ್ನು ಕಡ್ಡಾಯವಾಗಿ ಉಪಯೋಗಿಸಬೇಕು. 9 ಲೀಟರ್ ಸಾಮರ್ಥ್ಯದ ವಾಟರ್ ಪ್ರೇಜರ್ ಮಾದರಿ ಅಗ್ನಿನಂದಕ ಹಾಗೂ ಎರಡು ಬಕೆಟ್‌ಗಳಲ್ಲಿ ನೀರನ್ನು ಮತ್ತು ಮರಳನ್ನು ಇಟ್ಟಿರಬೇಕು ಜೊತೆಗೆ ಪ್ರತಿ ಮಳಿಗೆ ಪಕ್ಕದಲ್ಲಿ 2 ಡ್ರಂಗಳಲ್ಲಿ ಕನಿಷ್ಟ 400 ಲೀಟರ್ ನೀರನ್ನು ಕಡ್ಡಾಯವಾಗಿ ಶೇಖರಿಸಿಟ್ಟಿರಬೇಕು ಎಂದು ತಿಳಿಸಿದರು.
ಮಳಿಗೆಗಳಲ್ಲಿ ಮತ್ತು ಮಳಿಗೆಗಳ 50 ಮೀಟರ್ ದೂರದವರೆಗೆ ಧೂಮಪಾನ ಅಥವಾ ಕುಕ್ಕಿಂಗ್ ವ್ಯವಸ್ಥೆ ನಿಷೇಧ ಮಾಡಿದೆ. ಪಟಾಕಿ ಮಾರಾಟ ಮಳಿಗೆಗಳಲ್ಲಿ ರಾತ್ರಿ ಯಾರು ಮಲಗಬಾರದು ಹಾಗೂ ಅಪ್ರಾಪ್ತ ವಯಸ್ಸಿನ ಬಾಲ ಕಾರ್ಮಿಕರನ್ನು ಕೆಲಸಕ್ಕೆ ನೇಮಿಸಿಕೊಳ್ಳುವಂತಿಲ್ಲ ಎಂದು ಸೂಚಿಸಿದರು.
ಪರಿಸರ ಮಾಲಿನ್ಯ ನಿಯಂತ್ರಣ ಅಧಿಕಾರಿಗಳು ಮಳಿಗೆಗಳಿಗೆ ಭೇಟಿ ನೀಡಿ ಪಟಾಕಿ ಮಾರಾಟ ಮಳಿಗೆಗಳಲ್ಲಿ ಹೆಚ್ಚಿನ ಶಬ್ದ ಬರುವ ಪಟಾಕಿಗಳನ್ನು ಮಾರಾಟ ಮಾಡುವುದರ ಬಗ್ಗೆ ಪರಿಶೀಲನೆ ಮಾಡುವಂತೆ ಸೂಚಿಸಿದರು.
ಸಾರ್ವಜನಿಕರು ಏನು ಮಾಡಬೇಕು ಏನು ಮಾಡಬಾರದು ಎಂಬುದರ ಬಗ್ಗೆ ಪ್ರತಿ ಮಳಿಗೆಯಲ್ಲಿ ಬ್ಯಾನರ್ ಅಳವಡಿಸಲು ಸೂಚಿಸಿದರು.
ಸಾರ್ವಜನಿಕರು ರಾತ್ರಿ 10 ಗಂಟೆ ನಂತರ ಪಟಾಕಿಯನ್ನು ಸಿಡಿಸಬಾರದು ಹಾಗೂ ಪಟಾಕಿ ಸಿಡಿಸಿದ ನಂತರ ತ್ಯಾಜ್ಯ ವಸ್ತುಗಳನ್ನು ಸ್ವಚ್ಚಗೊಳಿಸಿ ಸರಿಯಾದ ರೀತಿಯಲ್ಲಿ ವಿಲೇವಾರಿ ಮಾಡಬೇಕು ಎಂದು ತಿಳಿಸಿದರು.
ಅಪರ ಜಿಲ್ಲಾಧಿಕಾರಿ ಮಂಜುನಾಥ್, ತಹಸೀಲ್ದಾರ್ ಗೀತಾ, ಅಗ್ನಿ ಶಾಮಕ ದಳದ ಅಧಿಕಾರಿ ಹಾಗೂ ಪಟಾಕಿ ಮಾರಾಟಗಾರರ ಸಂಘದ ಅಧ್ಯಕ್ಷರು ಹಾಗೂ ಮಾರಾಟಗಾರರು ಸಭೆಯಲ್ಲಿ ಹಾಜರಿದ್ದರು.
*-