ಸಾರ್ವಜನಿಕರ ಕರೆ ಸ್ವೀಕರಿಸುವುದು ಇನ್ನು ಮುಂದೆ ಅಧಿಕಾರಿಗಳಿಗೆ ಕಡ್ಡಾಯ
ಗ್ರಾಮೀಣ ಭಾಗದ ಜನರ ತೊಡಕುಗಳಿಗೆ ತಕ್ಷಣ ಸ್ಪಂದಿಸುವ ನಿಟ್ಟಿನಲ್ಲಿ ಕರ್ನಾಟಕ ಸರಕಾರದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಒಂದು ಮಹತ್ವದ ಸುತ್ತೋಲೆಯನ್ನು ಹೊರಡಿಸಿದೆ.
ಗ್ರಾಮ ಪಂಚಾಯತ್‌ನಿಂದ ಹಿಡಿದು ಜಿಲ್ಲಾ ಪಂಚಾಯತ್ ಮಟ್ಟದವರೆಗಿನ ಅಧಿಕಾರಿಗಳು ಸಾರ್ವಜನಿಕರು ಮತ್ತು ಜನಪ್ರತಿನಿಧಿಗಳ ಫೋನ್ ಕರೆಗಳನ್ನು ಕಡ್ಡಾಯವಾಗಿ ಸ್ವೀಕರಿಸಬೇಕು. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು,ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳು, ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಪಂಚಾಯತ್ ಕಾರ್ಯದರ್ಶಿಗಳು ಹಾಗೂ ದ್ವಿತೀಯ ದರ್ಜೆ ಲೆಕ್ಕ ಸಹಾಯಕರಗಳು ಜನರ ಅಹವಾಲುಗಳನ್ನು ಆಲಿಸುವುದು ಅಧಿಕಾರಿಗಳ ಮೊದಲ ಹೊಣೆಗಾರಿಕೆ ಆಗಿದೆ.
ಒಂದು ವೇಳೆ ಕೆಲಸದ ಒತ್ತಡದಲ್ಲಿ ಕರೆ ಸ್ವೀಕರಿಸಲು ಸಾಧ್ಯವಾಗದಿದ್ದರೆ, ನಂತರ ಮರಳಿ ಕರೆ ಮಾಡುವುದು ಕಡ್ಡಾಯ. ಸಾರ್ವಜನಿಕರ ಕರೆಗಳಿಗೆ ನಿರ್ಲಕ್ಷ್ಯ ತೋರುವುದು ಇಲ್ಲವೇ ಗೌರವಯುತವಾಗಿ ವರ್ತಿಸದಿದ್ದಲ್ಲಿ ನಿಯಮಾನುಸಾರ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಸುತ್ತೋಲೆಯಲ್ಲಿ ತಿಳಿಸಿದೆ.
ಸಾಮಾನ್ಯ ಜನರು ತಮ್ಮ ಸಣ್ಣಪುಟ್ಟ ಕೆಲಸಗಳಿಗಾಗಿ ಇಲ್ಲವೇ ದೂರು ನೀಡಲು ಕಚೇರಿಗಳಿಗೆ ಅಲೆಯುವುದು ತಪ್ಪುತ್ತದೆ. ಅಧಿಕಾರಿಗಳು ಫೋನ್ ಮೂಲಕವೇ ಲಭ್ಯವಿದ್ದರೆ ಗ್ರಾಮೀಣ ಭಾಗದ ಆಡಳಿತದಲ್ಲಿ ಪಾರದರ್ಶಕತೆ ಮತ್ತು ವೇಗ ಹೆಚ್ಚುತ್ತದೆ. ಈ ಆದೇಶವು ಜನಸಾಮಾನ್ಯರ ಧ್ವನಿಗೆ ಬೆಲೆ ನೀಡಲು ಹೊರಡಿಸಲಾಗಿದೆ. ನಮ್ಮ ಹಕ್ಕುಗಳನ್ನು ಚಲಾಯಿಸೋಣ, ಸುಸಂಸ್ಕೃತ ಆಡಳಿತಕ್ಕೆ ಸಹಕರಿಸೋಣ.
✍🏻 ಭರತ್ ಮಲ್ನಾಡ್







