ಕರ್ನಾಟಕ ಛಾಯಾಗ್ರಾಹಕರ ಸಂಘ (ಕೆಪಿಎ), ಬೆಂಗಳೂರು ಇವರ ನೇತೃತ್ವದಲ್ಲಿ ಕೆಪಿಎ ಆಸರೆ ಯೋಜನೆಯನ್ನು ಉದ್ಘಾಟಿಸಲಾಯಿತು. ಈ ಯೋಜನೆಯಡಿ ಸದಸ್ಯರಾಗಿರುವ ಛಾಯಾಗ್ರಾಹಕರು ನಿಧನರಾದಲ್ಲಿ, ಅವರ ಕುಟುಂಬಕ್ಕೆ ₹1 ಲಕ್ಷ ಆರ್ಥಿಕ ನೆರವು ನೀಡಲಾಗುತ್ತದೆ. ಇದೇ ಸಂದರ್ಭದಲ್ಲಿ ಯೋಜನೆಗೆ ಸದಸ್ಯತ್ವ ನೋಂದಣಿಯನ್ನೂ ಆರಂಭಿಸಲಾಯಿತು.
ಈ ಯೋಜನೆಯ ಸದಸ್ಯತ್ವ ಪಡೆಯಲು ₹110 ಶುಲ್ಕವನ್ನು ಪಾವತಿಸಬೇಕು. ಯೋಜನೆಯ ಸದಸ್ಯರಲ್ಲಿ ಯಾರಾದರೂ ಅಕಾಲಿಕವಾಗಿ ನಿಧನರಾದರೆ, ಉಳಿದ ಸದಸ್ಯರು ತಲಾ ₹10 ಸಹಾಯಧನವನ್ನು ನೀಡಬೇಕು. ಹೀಗೆ ಸದಸ್ಯರಿಂದ ಸಂಗ್ರಹವಾಗುವ ಮೊತ್ತವನ್ನು ಒಟ್ಟುಗೂಡಿಸಿ, ನಿಧನರಾದ ಛಾಯಾಗ್ರಾಹಕರ ಕುಟುಂಬಕ್ಕೆ ₹1 ಲಕ್ಷ ಆರ್ಥಿಕ ನೆರವು ನೀಡಲಾಗುವುದು. ಇದು ಛಾಯಾಗ್ರಾಹಕರ ಕುಟುಂಬಗಳಿಗೆ ಭದ್ರತೆ ಒದಗಿಸುವ ವಿಶೇಷ ಯೋಜನೆಯಾಗಿದೆ ಎಂದು ಕೆಪಿಎ ರಾಜ್ಯಾಧ್ಯಕ್ಷರಾದ ಹೆಚ್.ಎಸ್. ನಾಗೇಶ್ ಮಾಹಿತಿ ನೀಡಿದರು.
ಕೆಪಿಎ ಆಸರೆ ಯೋಜನೆ ನೋಂದಣಿ ಕಾರ್ಯಕ್ರಮವನ್ನು ದಕ್ಷಿಣ ಭಾರತ ಫೋಟೋ ಮತ್ತು ವಿಡಿಯೋ ಸಂಘದ ಅಧ್ಯಕ್ಷರಾದ ಎಸ್. ಪರಮೇಶ್ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಛಾಯಾಗ್ರಾಹಕರ ಹಿತದೃಷ್ಟಿಯಿಂದ ಈ ಯೋಜನೆಯನ್ನು ರೂಪಿಸಲಾಗಿದೆ. ಪ್ರತಿಯೊಬ್ಬ ಛಾಯಾಗ್ರಾಹಕರೂ ಈ ಯೋಜನೆಯ ಸದಸ್ಯತ್ವ ಪಡೆದು ಇದರ ಪ್ರಯೋಜನ ಪಡೆಯಬೇಕು. ರಾಜ್ಯಾದ್ಯಂತ ಸದಸ್ಯತ್ವ ನೋಂದಣಿ ಆರಂಭಗೊಂಡಿದ್ದು, ವಿಶೇಷವಾಗಿ ಬೆಂಗಳೂರಿನ ಛಾಯಾಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯತ್ವ ಪಡೆಯುವಂತೆ ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಹಿರಿಯ ಛಾಯಾಗ್ರಾಹಕರಾದ ಗುರುಶ್ರೀ ಶ್ರೀನಿವಾಸ್, ವಿಶ್ವನಾಥ್ ಸಿಂಗ್, ಕೆಪಿಎ ಉಪಾಧ್ಯಕ್ಷರಾದ ಹೆಚ್.ಎನ್. ರವಿಕುಮಾರ್, ಜಂಟಿ ಕಾರ್ಯದರ್ಶಿ ಎನ್. ಪಳನಿ, ಪಿಆರ್‌ಒ ಎಂ.ಎಸ್. ಶಂಕರ್, ಕಚೇರಿ ಆಡಳಿತಾಧಿಕಾರಿಗಳಾದ ರವಿಶಂಕರ್, ಚಂದ್ರಶೇಖರ ಬೆಳಗುಂಬ, ಹಾಲಪ್ಪ, ಕೆಪಿಎ ನಿರ್ದೇಶಕರಾದ ರಾಕೇಶ್ ಕುಮಾರ್ ಟಿ.ಪಿ., ಪ್ರಮೋದ್ ಗೌಡ, ಸಂಘಟನಾ ಕಾರ್ಯದರ್ಶಿ ಎಚ್.ಎನ್. ತಿಮ್ಮೇಗೌಡ ಹಾಗೂ ಸ್ಟಾರ್ ಮುರುಳಿ ಉಪಸ್ಥಿತರಿದ್ದರು.
ಕಾರ್ಯಕ್ರಮಕ್ಕೆ ಕೆಪಿಎ ಕಾರ್ಯದರ್ಶಿ ಟಿ.ಸಿ. ನಾಗರಾಜ್ ಸ್ವಾಗತ ಕೋರಿದರು. ನೂರಾರು ಛಾಯಾಗ್ರಾಹಕರು, ಕೆಪಿಎ ಆಡಳಿತ ಮಂಡಳಿ ಸದಸ್ಯರು ಹಾಗೂ ಕೆಪಿಎ ಆಜೀವ ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿ, ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.


