

ಅರಸೀಕೆರೆ ತಾಲ್ಲೂಕಿನ ಪ್ರಾಚೀನ ಗ್ರಾಮವಾಗಿರುವ ಬೆಳಗುಂಬದಲ್ಲಿ ಸಂಶೋಧಕ ಡಾ. ಹರೀಶ್ ಕುಮಾರ್ ಹೆಂಜಗೊಂಡನಹಳ್ಳಿ ಅವರು ಕ್ಷೇತ್ರಕಾರ್ಯ ಕೈಗೊಂಡಾಗ ಬೃಹತ್ ಶಿಲಾಯುಗ ಕಾಲಕ್ಕೆ ಸೇರಿದ ನಿಲುವುಗಲ್ಲು ಪತ್ತೆಯಾಗಿದೆ. ಅರಸೀಕೆರೆಯಿಂದ 13.8 ಕಿಲೋಮೀಟರ್ ದೂರದಲ್ಲಿರುವ ಬೆಳಗುಂಬ ಗ್ರಾಮವು ಮಾದರಿ ಜಯಂತಿ ಗ್ರಾಮವಾಗಿದೆ. ಈ ಗ್ರಾಮದಲ್ಲಿ ಹೊಯ್ಸಳರ ವಿಷ್ಣುವರ್ಧನ ಹಾಗೂ ಎರಡನೇ ವೀರಬಲ್ಲಾಳನ ಕಾಲದಲ್ಲಿ ಕೆತ್ತಿಸಿದ 12ನೇ ಶತಮಾನದ ಮೂರು ಶಾಸನಗಳಿದ್ದು ಸ್ಥಳೀಯ ನಾಡ ಪ್ರಭುಗಳಿಂದ ಮೂರು ಶಿವಾಲಯಗಳು, ಕೆರೆ, ಬಾವಿಗಳು, ಮಂಟಪಗಳನ್ನು ಆ ಕಾಲದಲ್ಲೇ ನಿರ್ಮಿಸಲಾಗಿದೆ. ಇಲ್ಲಿನ ವೀರಭದ್ರನ ದೇವಾಲಯದ ಗರುಡಗಂಬದ ಮೇಲೆ ಸುಮಾರು 16ನೇ ಶತಮಾನದ ಮತ್ತೊಂದು ಶಾಸನವಿದೆ. ಶಾಸನಗಳಲ್ಲಿ ಈ ಗ್ರಾಮವನ್ನು ಬೆಳ್ಳಿಗುಂಬ ಎಂದು ಕರೆಯಲಾಗಿದ್ದು, ಕೈಲಾಸಕ್ಕೂ ಮಿಗಿಲೆಂದು ವರ್ಣಿಸಲಾಗಿದೆ. ಬಿ ಎಲ್ ರೈಸ್ ದಾಖಲಿಸಿರುವ ಈ ಶಾಸನಗಳು ನಾಪತ್ತೆಯಾಗಿವೆ. ಈ ಗ್ರಾಮದ ಕೆರೆಯ ಪಕ್ಕದಲ್ಲಿ 9 ಅಡಿ ಎತ್ತರವಿರುವ 4 ಅಡಿ ಅಗಲವಾಗಿರುವ 2 ಅಡಿ ದಪ್ಪನಾದ ಬೃಹತ್ ನಿಲುವುಗಲ್ಲು ಪತ್ತೆಯಾಗಿದೆ. ಈ ನಿಲುವುಗಲ್ಲು ಪೂರ್ವ ಹಾಗೂ ಪಶ್ಚಿಮೂಭಿಮುಖವಾಗಿದೆ. ಈ ನಿಲುವುಗಲ್ಲಿನ ಪಕ್ಕದಲ್ಲಿಯೇ 6 ಅಡಿ ಅಗಲವಾದ ಮತ್ತು 6.3 ಅಡಿ ಉದ್ದವಾಗಿರುವ 2 ಅಡಿ ದಪ್ಪನಾದ ಒಂದು ದೈತ್ಯ ಆಸುಗಲ್ಲಿದೆ. ಇದು ಕಲ್ಮನೆಯೊಂದು ಭೂಮಿಯಲ್ಲಿ ಮುಚ್ಚು ಹೋಗಿರುವಂತೆ ಕಾಣುತ್ತಿದೆ. ಉತ್ಕನನ ಮಾಡಿದರೆ ಹೆಚ್ಚಿನ ಮಾಹಿತಿ ಲಭ್ಯವಾಗುತ್ತದೆ. ಈರೀತಿಯ ನಿಲುವುಗಲ್ಲುಗಳು ಅರಸೀಕೆರೆ ತಾಲೂಕಿನ ಬಾಣಾವರ ಹೋಬಳಿಯಲ್ಲಿ ಹೆಚ್ಚು ಕಾಣಸಿಗುತ್ತವೆ. ಇವು ಮೂರು ಸಾವಿರ ವರ್ಷಗಳಷ್ಟು ಪುರಾತನವಾವ(ಮೆಗಾಲಿತಿಕ್) ಬೃಹತ್ ಶಿಲಾಯುಗದ ಸಮಾಧಿ ಸ್ಥಳಗಳಾಗಿವೆ. ಬೆಳಗುಂಬ ಗ್ರಾಮದ ಪೂರ್ವ ದಿಕ್ಕಿನಲ್ಲಿ ಸಿದ್ದೇಶ್ವರ ಬೆಟ್ಟವಿದ್ದು ಆ ಭಾಗದಿಂದ ಸಣ್ಣ ನೀರಿನ ಸೆಲೆ ಹರಿದುಬರುತ್ತದೆ. ಈ ತೊರೆಗೆ ಅಡ್ಡಲಾಗಿ ಹೊಯ್ಸಳರ ಕಾಲದಲ್ಲಿ ಕೆರೆಯೊಂದನ್ನು ನಿರ್ಮಿಸಲಾಗಿದೆ. ಗವಿ ಸಿದ್ದೇಶ್ವರ ಬೆಟ್ಟದ ಭಾಗದಿಂದ ಹರಿದು ಬರುವ ಪುಟ್ಟ ತೊರೆ ಸದಾ ನೀರಿನಿಂದ ಕೂಡಿದ ಜಾಗವಾಗಿದೆ. ಈ ತೊರೆಯನ್ನು ಅಜ್ಜನಹಳ್ಳಿ ಭಾಗದಲ್ಲಿ ರಾಮೇಶ್ವರ ವಜ್ರ ಎಂದು ಕರೆಯುತ್ತಾರೆ. ಸದಾ ನೀರಿರುವುದರಿಂದ ಪುಣ್ಯಕ್ಷೇತ್ರವಾಗಿ ಜನಮಾನಸದಲ್ಲಿ ಪೂಜನೀಯವಾಗಿದೆ. ಈ ತೊರೆಯೆ ಶಿಲಾಯುಗದ ಜನರ ಬಾಯಾರಿಕೆ ನೀಗಿಸುತ್ತಿತ್ತು. ಬೆಳಗುಂಬ ಸಮೀಪದ ಗವಿಸಿದ್ದೇಶ್ವರ ಬೆಟ್ಟದ ಕಲ್ಲಾಸರೆಗಳು ಶಿಲಾಯುಗದ ಜನರ ವಾಸದ ನೆಲೆಯಾಗಿ ಆಶ್ರಯವಾಗಿದ್ದವು. ಕಲ್ಲಾಸರೆಗಳು ಹಾಗೂ ವರ್ಷಪೂರ್ತಿ ದೊರೆಯುವ ನೀರಿನ ತಾಣಗಳು ಇಲ್ಲಿರುವುದರಿಂದ ಈ ಪ್ರದೇಶ ಆದಿಮಾನವರಿಗೆ ವಾಸ ಮಾಡಲು ಯೋಗ್ಯವಾಗಿತ್ತು ಎಂದು ಹೇಳಬಹುದು. ಗವಿಸಿದ್ದೇಶ್ವರ ಬೆಟ್ಟದ ಮೇಲೆ ವಿವಿಧ ಆಕೃತಿಯ ಶಿಲಾಯುಗದ ಜನರು ಬಳಸಿದ ಕೆಲವು ಕಲ್ಲಿನ ಆಯುಧಗಳನ್ನ ಕಾಣಬಹುದು. ಬೆಳಗುಂಬ ಗ್ರಾಮದ ಸುತ್ತಮುತ್ತಲಿರುವ ತಳಲುತೊರೆ, ಕೆಲ್ಲಂಗೆರೆ, ಆದಿಹಳ್ಳಿ ಗ್ರಾಮಗಳಲ್ಲಿಯೂ ಬೃಹತ್ ಶಿಲಾಯುಗ ಕಾಲದ ನಿಲುವುಗಲ್ಲುಗಳು ಪತ್ತೆಯಾಗಿರುವುದನ್ನು ಕಾಣಬಹುದು. ಹಾಗಾಗಿ ಬೆಳಗುಂಬ ಗ್ರಾಮವು 3000 ವರ್ಷಗಳಷ್ಟು ಪುರಾತನವಾದ ಕಾಲದಿಂದಲೂ ಜನವಸತಿಯ ಕೇಂದ್ರವಾಗಿತ್ತು ಎಂಬುದನ್ನು ಸ್ಪಷ್ಟ ಪಡಿಸಬಹುದು. ಈ ಗ್ರಾಮದ ಪಶ್ಚಿಮ ಭಾಗದಲ್ಲಿ ಮತ್ತೆ ಕೆಲವು ನಿಲುವುಗಲ್ಲುಗಳಿದ್ದು ಅವುಗಳನ್ನು ರೈತರು ಅರಿವಿಲ್ಲದೆ ಕೃಷಿಚಟುವಟಿಕೆಗಳಿಗೆ ಅಡ್ಡಿಯಾಗುತ್ತವೆ. ಎಂಬ ಕಾರಣಕ್ಕೆ ತೆರವುಗೊಳಿಸಿದರು ಎಂದು ಸ್ಥಳೀಯರು ಹೇಳುತ್ತಾರೆ.







