
ರಾಗಿ ಖರೀದಿಯಲ್ಲಿ ಅಕ್ರಮ ನಡೆದರೆ ಅವರ ವಿರುದ್ಧ ಕ್ರಮ -ಜಿಲ್ಲಾಧಿಕಾರಿ
ಹಾಸನ – ನೋಂದಣಿಯ ಜೇಷ್ಠತೆಯಂತೆ ರೈತರಿಂದ ಖರೀದಿ ಕೇಂದ್ರಗಳಲ್ಲಿ ಕಡ್ಡಾಯವಾಗಿ ರಾಗಿ ತೆಗೆದುಕೊಳ್ಳಬೇಕು ಹಾಗೂ ದಿನಕ್ಕೆ ನಿಗದಿಪಡಿಸುವ ರೈತರಿಂದ ಮಾತ್ರ ಪಡೆಯಬೇಕು, ವ್ಯಾಪಾರಸ್ಥರು, ಮಧ್ಯವರ್ತಿ ಆದ್ಯತೆ ನೀಡಿದರೆ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಕೆ.ಎಸ್ ಲತಾ ಕುಮಾರಿ ಸೂಚಿಸಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಇಂದು ಜಿಲ್ಲೆಯಲ್ಲಿ ಬೆಂಬಲ ಬೆಲೆ ಯೋಜನೆಯಡಿ ಖರೀದಿ ಕೇಂದ್ರಗಳಲ್ಲಿ ರೈತರಿಗೆ ಎದುರಾಗುತ್ತಿರುವ ಸಮಸ್ಯೆಗಳ ಕುರಿತು ಸಭೆ ನಡೆಸಿ ಅವರು ಮಾತನಾಡಿದರು.
ಪ್ರತಿಯೊಂದು ಖರೀದಿ ಕೇಂದ್ರದಲ್ಲಿ ರಾಗಿಯ ಗುಣಮಟ್ಟವನ್ನು ಪರೀಕ್ಷೆ ಮಾಡಿಯೇ ತೆಗೆದುಕೊಳ್ಳಬೇಕು ಹಾಗೂ ಸ್ವಚ್ಛತೆಯನ್ನು ಕಾಪಾಡಿಕೊಳ್ಳಬೇಕು ತೂಕದಲ್ಲಿ ಯಾವುದೇ ಲೋಪವಾಗದಂತೆ ಅಧಿಕಾರಿಗಳು ಎಚ್ಚರ ವಹಿಸುವಂತೆ ಸೂಚಿಸಿದರು.
ಖರೀದಿ ಕೇಂದ್ರದಿAದ ಗೋದಾಮಿಗೆ ಸ್ಥಳಾಂತರಿಸಲು ಟ್ರಕ್ ಗಳ ಸಂಖ್ಯೆ ಕಡಿಮೆ ಇದೆ ದಿನವಿಡೀ ರೈತರು ಕಾಯಬೇಕಾದ ಸ್ಥಿತಿ ಎದುರಾಗಿದೆ ಎಂದು ದೂರುಗಳು ಸಲ್ಲಿಕೆಯಾಗುತ್ತಿವೆ ಆದ್ದರಿಂದ ಕೂಡಲೇ ಹೆಚ್ಚಿನ ಟ್ರಕ್ ಗಳನ್ನು ಒದಗಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಖರೀದಿ ಕೇಂದ್ರದ ಆವರಣದಲ್ಲಿ ಖಡ್ಡಾಯವಾಗಿ ಕುಡಿಯುವ ನೀರಿನ ವ್ಯವಸ್ಥೆ ಇರಬೇಕು ಹಾಗೂ ಅಗತ್ಯವಿದ್ದರೆ ಉಪಹಾರದ ವ್ಯವಸ್ಥೆಯನ್ನು ಸಹ ಮಾಡಬೇಕು, ಖರೀದಿ ಕೇಂದ್ರದ ಆವರಣದಲ್ಲಿ ಶೌಚಾಲಯ ವ್ಯವಸ್ಥೆ ಮಾಡುವಂತೆ ಸೂಚಿಸಿದರು.
ಚನ್ನರಾಯಪಟ್ಟಣ ತಾಲೂಕಿನ ಹಿರೀಸಾವೆ ಹೋಬಳಿಯ ಬೂಕನಬೆಟ್ಟ ಖರೀದಿ ಕೇಂದ್ರದಲ್ಲಿ ಮಧ್ಯವರ್ತಿಗಳ ಹಾವಳಿ ಹೆಚ್ಚಾಗಿದೆ, ಹಣ ನೀಡಿದರೆ ಮೊದಲು ಆದ್ಯತೆ ಮೇಲೆ ರಾಗಿ ಪಡೆಯುತ್ತಾರೆ ಎಂಬುದು ಪತ್ರಿಕೆಯಲ್ಲಿ ವರದಿಯಾಗಿದೆ ಇದರ ಬಗ್ಗೆ ಕೂಡಲೇ ಕ್ರಮ ಕೈಗೊಳ್ಳುವಂತೆ ತಿಳಿಸಿದರು.
ಪ್ರತಿ ತಾಲೂಕುಗಳಲ್ಲಿ ತಹಸಿಲ್ದಾರ್ ಗಳು ಖಡ್ಡಾಯವಾಗಿ ಮೇಲುಸ್ತುವಾರಿ ಮಾಡಬೇಕು ರೈತರಿಗೆ ಯಾವುದೇ ತೊಂದರೆ ಆಗದಂತೆ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.
ಮಳೆ ಬರುವ ಸಾಧ್ಯತೆ ಇದ್ದರೆ ಟಾರ್ಪಲ್ ವ್ಯವಸ್ಥೆಯನ್ನು ಮಾಡಬೇಕು ಹಾಗೂ ರೈತರ ವಾಹನದಿಂದ ತಿಳಿಸಲು ಇಚ್ಚಿನ ಹಣವನ್ನು ಪಡೆಯುತ್ತಿದ್ದಾರೆ ಎಂಬ ಆರೋಪ ಪ್ರತಿನಿತ್ಯ ದಿನಪತ್ರಿಕೆಗಳಲ್ಲಿ ಪ್ರಕಟವಾಗುತ್ತಿದೆ ಇದರ ಬಗ್ಗೆ ಕ್ರಮ ಕೈಗೊಳ್ಳಲು ಸೂಚಿಸಿದರು.
ಕರ್ನಾಟಕ ರಾಜ್ಯ ಅಹಾರ ಮತ್ತು ನಾಗರಿಕ ಸರಬರಾಜು ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ಜಗದೀಶ್ ಅವರು ಮಾತನಾಡಿ ಚನ್ನರಾಯಪಟ್ಟಣ ತಾಲೂಕಿನ ನುಗ್ಗೆಹಳ್ಳಿ ಹಾಗೂ ಬಾಗೂರು ಖರೀದಿ ಕೇಂದ್ರಗಳಿಗೆ ಭೇಟಿ ನೀಡಿದ್ದು, ರೈತರಿಗೆ ಉಂಟಾಗುತ್ತಿರುವ ಸಮಸ್ಯೆಗಳ ಕುರಿತು ಕೂಡಲೇ ಬಗೆಹರಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.
ಸಭೆಯಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪನಿರ್ದೇಶಕ ಅರುಣ್ ಕುಮಾರ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು







